ತುಂಬೆಗಿಡ
ಲ್ಯಾಮಿಯೇಸೀ (ಲೇಬಿಯೇಟೀ) ಕುಟುಂಬಕ್ಕೆ ಸೇರಿದ ಗಾತ್ರದ ಒಂದು ಮೂಲಿಕೆ ಸಸ್ಯ.  ಇದು ಕುರುಚಲು ಗಿಡವಾಗಿ ಇಲ್ಲವೆ ಪೊದೆ ಗಿಡವಾಗಿ ಬೆಳೆಯುವುದು. ಲ್ಯೂಕಾಸ್ ಆಸ್ಪರ ಇದರ ಶಾಸ್ತ್ರೀಯ ಹೆಸರು.

ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು 3000 ಎತ್ತರದವರೆಗಿನ ಎಲ್ಲ ಪ್ರದೇಶಗಳಲ್ಲಿ, ಮಾರಿಷಸ್, ಜಾವ, ಫಿಲಿಪೀನ್ಸ್ ದ್ವೀಪಗಳಲ್ಲಿ ಇದು ಬೆಳೆಯುವುದು. ಗದ್ದೆಗಳಲ್ಲಿ, ಪಾಳುಬಿದ್ದ ಪ್ರದೇಶಗಳಲ್ಲಿ, ಮಾರ್ಗದ ಇಬ್ಬದಿಗಳಲ್ಲಿ ಇದು ಕಳೆಗಿಡವಾಗಿ ಬೆಳೆಯುವುದನ್ನು ಕಾಣಬಹುದು. ತುಂಬೆಗಿಡ ಸುಮಾರು 30-60 ಸೆಂ.ಮೀ. ಎತ್ತರಕ್ಕೆ ಬೆಳೆಯುವುದು. ಇದರ ಕಾಂಡ ನೇರ. ಇದು ಕೆಲಭಾಗದಿಂದಲೇ ಶಾಖೋಪಶಾಖೆಗಳಾಗಿ ಕವಲೊಡೆಯುತ್ತದೆ. ಕಾಂಡವನ್ನೂ ಎಲೆಗಳನ್ನೂ ತುಪ್ಪುಳಿನಂಥ ಮೃದುರೋಮಗಳು ಆವರಿಸಿವೆ. ಎಲೆಗಳು ಸರಳರೀತಿಯವು; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ರೇಖೀಯ. ಇವು ಕಿರಿಯಗಲದವಾಗಿದೆ. ತುಂಬೆಗಿಡದಲ್ಲಿ ಲೇಬಿಯೇಟೀ ಕುಟುಂಬದ ವಿಶೇಷ ಲಕ್ಷ್ಷಣಗಳಲ್ಲೊಂದಾದ  ವರ್ಟಿಸಿಲ್ಯಾಸ್ಟರ್ ಪುಷ್ಪಮಂಜರಿ ಉಂಟು. ಇದು ಮಧ್ಯಾರಂಭಿ ಮಾದರಿಯ ಹೂಗೊಂಚಲು. ಕಂಕುಳಿನಲ್ಲಿ ಸಮಾವೇಶಗೊಂಡಿದೆ. ಹೂಗಳು ಸಹ ತುಪ್ಪುಳಿನಿಂದ ಆವೃತವಾಗಿವೆ. ಪುಷ್ಪದಳಗಳು ಇರ್ತುಟಿಯಾಕಾರದವು. ಪುಷ್ಪಪಾತ್ರೆ ಕೊಳವೆಯಂತಿದೆ.

ತುಂಬೆಗಿಡಕ್ಕೆ ವೈದ್ಯಕೀಯ ಮಹತ್ವ ಉಂಟು. ದಕ್ಷಿಣ ಭಾರತದ ಹಳ್ಳಿಗಳಲ್ಲಿ ಇದನ್ನು ಸಾಮಾನ್ಯವಾಗಿ ಜ್ವರನಿವಾರಕ ಕಷಾಯದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಪೂರ್ವಭಾರತ, ಮಣಿಪುರ ಪ್ರದೇಶಗಳಲ್ಲಿ ಇದರಿಂದ ಪಡೆಯಲಾಗುವ ಎಣ್ಣೆಯನ್ನು ಹಾವು ಕಡಿತಕ್ಕೆ ಉಪಯೋಗಿಸುತ್ತಾರೆ. ಇದು ಕೀಟನಾಶಕವೂ ಹೌದು. ಇದರ ಎಲೆಯಿಂದ ತೆಗೆಯುವ ರಸವನ್ನು ಸಂಧಿವಾತಕ್ಕೆ, ಕಜ್ಜಿತುರಿಗೆ, ಊದಿಕೊಂಡು ನೋವುಂಟುಮಾಡುವ ಭಾಗಗಳಿಗೆ ಲೇಪಿಸುವುದುಂಟು. ದೀರ್ಘ ಕಾಲದಿಂದ ಬೇರೂರಿದ ಸೊರಾಸಿಸ್ ಎಂಬ ಚರ್ಮರೋಗಕ್ಕೆ ಈ ರಸವನ್ನು ಹಚ್ಚುವುದಿದೆ. ಉತ್ತರ ಬಂಗಾಳದಲ್ಲಿ ಈ ಹೂಗಳನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಕೆಮ್ಮು ಮತ್ತು ನೆಗಡಿಗೆ ಮದ್ದಾಗಿ ಬಳಸುವರು. ಅಲ್ಕೊಹಾಲ್ ಬಳಸಿ ಹೊರತೆಗೆಯಲಾಗುವ ಇದರ ರಸ ಮೈಕ್ರೋಕಾಕಸ್ ಪಯೋಜೀನಸ್, ಎಷರೇಶಿಯ ಕೋಲೈ ಎಂಬ ಬಾಕ್ಟೀರಿಯಾಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.	(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ